Saturday, November 22, 2008

ಆ ಮಧ್ಯಾಹ್ನ ಸಣ್ಣಗೆ ಮಳೆಯಿತ್ತು

ಶನಿವಾರ ಬಿಡುವು.
ಸೆಂಟ್ರಲ್ ಲೈಬ್ರರಿಯಲ್ಲಿ ಕುಳಿತು ಕಾದಂಬರಿಯೊಂದನ್ನು ಓದಿ ಮುಗಿಸುವ ಅವಸರದಲ್ಲಿದ್ದೆ.
ನಿರ್ಜನ ಲೈಬ್ರರಿ. ಹೊರಗೆ ನಿಯತಕಾಲಿಕೆಗಳು ಇರುವ ಟೇಬಲ್ಲಿನ ಸುತ್ತ ಜನ. ಅಲ್ಲಿರುವ ಟ್ಯಾಬ್ಲಾಯಿಡುಗಳಿಗೆ ಅಪಾರ ಬೇಡಿಕೆ.
ಅಷ್ಟು ಹೊತ್ತಿಗೆ ಅವನು ಲೈಬ್ರರಿಗೆ ಬಂದ. ಜುಬ್ಬಾ ತೊಟ್ಟಿದ್ದ. ವಯಸ್ಸು ಐವತ್ತು ದಾಟಿದಂತೆ ಕಾಣುತ್ತಿತ್ತು. ಆಗಷ್ಟೇ ಊಟ ಮುಗಿಸಿರಬೇಕು. ತುಂಬುಗಡ್ಡಕ್ಕೆ ಮೊಸರನ್ನ ಮೆತ್ತಿದ್ದನ್ನೂ ಅವನು ಸರಿಯಾಗಿ ತೊಳೆದುಕೊಂಡಿರಲಿಲ್ಲ.
ಬಂದವನೇ, ನಿನ್ನೆಯೋ ಮೊನ್ನೆಯೋ ಓದಿಟ್ಟ ಪುಸ್ತಕಕ್ಕಾಗಿ ಹುಡುಕಾಡುವವನಂತೆ ಹುಡುಕಾಡಿದ. ಅದನ್ನು ಅವನು ಅಲ್ಲೆಲ್ಲೋ ಥಟ್ಟನೆ ಸಿಗುವಂತೆ ಎತ್ತಿಟ್ಟಿದ್ದ ಎಂದು ಕಾಣುತ್ತದೆ.
ತುಂಬಾ ಹೊತ್ತು ಹುಡುಕಿ ನಿರಾಶನಾಗಿ ನನ್ನ ಬಳಿ ಬಂದ. ನಾನು ಓದುತ್ತಿರುವ ಪುಸ್ತಕವನ್ನು ನೋಡಿದ. ಅವನು ಅರ್ಧ ಓದಿಟ್ಟ ಪುಸ್ತಕ ಅದೇ ಆಗಿತ್ತೆಂದು ಕಾಣುತ್ತದೆ. ನಾನು ಮಾತಾಡಿಸುವುದಕ್ಕೆ ಹೋಗಲಿಲ್ಲ. ಸುಮ್ಮನೆ ನನ್ನೆದುರು ಕೂತ. ನಾನು ಓದುತ್ತಲೇ ಇದ್ದೆ.
ಸುಮಾರು ಅರ್ಧಗಂಟೆ ಹಾಗೇ ಕೂತಿದ್ದ. ನಾನು ಬೇಗ ಓದಿ ಮುಗಿಸಬಹುದು ಎಂಬ ಭರವಸೆಯಿಂದಲೋ ಎಂಬಂತೆ ಕಾಯುತ್ತಿದ್ದ.
ಅವನನ್ನು ವಾರೆಗಣ್ಣಿಂದ ನೋಡಿದವನು ಅವನನ್ನು ಮಾತಾಡಿಸುವ ಗೋಜಿಗೂ ಹೋಗದೆ ಹಠದಿಂದ ಎಂಬಂತೆ ಓದುತ್ತಾ ಕೂತೆ.
ಮತ್ತೊಂದಷ್ಟು ಹೊತ್ತು ಕೂತಿದ್ದು ಕೊನೆಗೆ ನಿರಾಸೆಯಿಂದ ಎದ್ದು ಹೋದ.
ಹೋಗುವಾಗ ಅವನ ಕಣ್ಣುಗಳು ತುಂಬಿ ಬಂದಿದ್ದವು ಎಂದು ಈಗ ಅನ್ನಿಸುತ್ತದೆ.
ನಾನ್ಯಾಕೆ ಅವನಿಗೆ ಆ ಪುಸ್ತಕವನ್ನು ಕೊಡಲಿಲ್ಲ. ಅವನನ್ನು ಯಾಕೆ ಮಾತಾಡಿಸಲಿಲ್ಲ. ಅವನು ನಾನು ಓದುತ್ತಿದ್ದ ಪುಸ್ತಕಕ್ಕಾಗೇ ಕಾಯುತ್ತಿದ್ದನಾ ಅನ್ನುವುದೂ ಗೊತ್ತಿಲ್ಲ.
ತಿರಸ್ಕೃತಗೊಂಡ ಪ್ರೇಮಿಯ ಹಾಗೆ ಅವನು ಮರಳಿ ಹೋಗುವುದನ್ನು ಮಾತ್ರ ನಾನು ಮರೆಯಲಾರೆ.

No comments: