Friday, November 21, 2008

ದಿನದ ಕೊನೆಗೆ ನಾಲ್ಕು ಮಾತು

ದಿನಾ ಹುಟ್ಟಿ ದಿನಾ ಸಾಯುವ ಹಗಲು, ಕ್ಷಣಕ್ಷಣ ಹುಟ್ಟಿ ಮರುಕ್ಷಣ ಸಾಯುವ ನಮ್ಮ ಆಸೆ, ಹಂಬಲ, ವೈರಾಗ್ಯ ಮತ್ತು ವ್ಯಾಮೋಹ, ತುಂಬ ದಿನ ಹಾಗೇ ಉಳಿದುಬಿಡುವ ಒಂದು ಪ್ರೇಮ, ಮತ್ತೊಂದಷ್ಟು ದಿನಗಳನ್ನು ನೀರಸಗೊಳಿಸುವ ವಿರಹ, ಅವನನ್ನು ಚುಚ್ಚಿ ನೋಯಿಸುವ ಮಾನವೀಯ ಗುಣ, ಅವಳನ್ನು ಕಂಗೆಡಿಸುವಂತೆ ಪ್ರೀತಿಸುವ ಮೃಗೀಯ ಗುಣ.
ಹೀಗೆ ಬರೆಯಲು ಕೂತಾಗ ಏನೇನೋ ಕಾಡುತ್ತದೆ. ಇಷ್ಟು ದಿನ ಬರೆಯುತ್ತಿದ್ದೆ. ಬೇರೆಲ್ಲೋ ಹೇಗೋ. ಅದನ್ನೆಲ್ಲ ಪಕ್ಕಕ್ಕಿಟ್ಟು ಹಳೆಯ ಜನ್ಮದಿಂದ ಕಳಚಿಕೊಂಡು ಕನ್ನಡಿ ಮುಂದೆ ನಿಂತಿದ್ದೇನೆ. ಎಂದೂ ಕಳೆದುಕೊಳ್ಳಬಾರದ್ದು ಮೂರೇ ಮೂರು- ಇಂಟಿಗ್ರಿಟಿ, ಮುಗ್ಧತೆ ಮತ್ತು ಮೊನ್ನೆ ಮೊನ್ನೆ ಕೊಂಡ ಲ್ಯಾಪ್-ಟಾಪು.
ತಿಂಗಳಾನುಗಟ್ಟಲೆ ನಲ್ಲಿ ಸೋರುತ್ತಿದ್ದರೂ ಸರಿಪಡಿಸಲಾಗದ ಸೋಮಾರಿತನ ಇಷ್ಟವಿಲ್ಲ. ಬೇರೊಬ್ಬರು ಏನಾದರೂ ಮಾಡಿ ಅಂದಾಗ ಇಷ್ಟವಾಗದೇ ಹೋದರೆ ಮಾಡದೇ ಉಳಿಯುವ ಸ್ವಾತಂತ್ರ್ಯ ಬೇಕು.
ಪ್ರತಿರಾತ್ರಿ ಇಲ್ಲಿ ನಾಲ್ಕಕ್ಷರ ಗೀಚುತ್ತೇನೆ.
ಅಂದಹಾಗೆ ಬರೆಯುವುದು ಎಷ್ಚು ಕಷ್ಟ ನೋಡಿ. ಇಷ್ಟವಾದರೆ ಓದಿ ಅನ್ನುವುದು ಸುಳ್ಳಾಗುತ್ತದೆ. ಇಷ್ಟವಾಗದ ಹೊರತು ಯಾರೂ ಓದುವುದಿಲ್ಲ. ಓದಿದರೆ ಓದಿ ಬಿಟ್ಟರೆ ಬಿಡಿ ಅಂದರೆ ದುರಹಂಕಾರವಾಗುತ್ತದೆ. ಬೇಕಾದ್ರೆ ಓದ್ಕೊಳ್ಳಲಿ ಅಂದ ಉಡಾಫೆಯಾಗುತ್ತದೆ. , ಬೇಡಿಕೆ ಯಾವುದೂ ಇಲ್ಲಿ ಮುಖ್ಯವಲ್ಲ.
ಪ್ರೀತಿಯ ಹಾಗೆ ಇದು ಇಬ್ಬರೂ ಹೇಳದೇ, ಸಹಜವಾಗಿ ಘಟಿಸುವ ಕ್ರಿಯೆ ಆಗಬೇಕು. ಹೀಗಾಗಿ ನಾನೇನೂ ಹೇಳುವುದಿಲ್ಲ. ಅಂಥದ್ದೇನಾದರೂ ನಡೆದರೆ ನಡೆಯಲಿ.
ಪ್ರೀತಿಯಿಂದ..
ರಿಶಿ

1 comment:

ಜಿ ಎನ್ ಮೋಹನ್ said...

ಚೆನ್ನಾಗಿದೆ

'ಶೃಂಗೇರಿಯಿಂದ ಹತ್ತು ಕಿಲೋಮೀಟರ್, ಹೊರನಾಡಿನಿಂದ ಇಪ್ಪತ್ತು ಕಿಲೋಮೀಟರ್ . ನಡುವಿನ ಪುಟ್ಟ ಹಳ್ಳಿ ನಮ್ಮೂರು. ಇತ್ತೀಚೆಗೆ ಕೊಂಚ ರಕ್ತಸಿಕ್ತವಾಗಿದೆ. ನಾನು ಬೆಂಗಳೂರು ಸೇರಿದ್ದೇನೆ. ನಮ್ಮೂರಿನ ಗುಬ್ಬಚ್ಚಿ ಗೊರವಂಕಗಳನ್ನು ಮಿಸ್ ಮಾಡಿಕೊಂಡಿದ್ದೇನೆ.' ಎಂಬ ಮಾತುಗಳು ಕಾಡಿತು.
-ಜಿ ಎನ್ ಮೋಹನ್