Monday, November 24, 2008

ವ್ಯಸನ

ನಮ್ಮೂರಲ್ಲೊಬ್ಬ ಟೈಲರ್ ಇದ್ದ. ಬೀರಣ್ಣ, ಬೀರಪ್ಪ ಅಂತೆಲ್ಲ ಅವನಿಗೆ ಅನೇಕ ಹೆಸರು. ಬೀರ ಅಂತ ಅಪ್ಪ ಇಟ್ಟ ಹೆಸರಿರಬೇಕು. ಯಾರ ಜೊತೆಗೂ ಮಾತಾಡುತ್ತಿರಲಿಲ್ಲ. ತನ್ನ ಪಾಡಿಗೆ ಬಟ್ಟೆ ಹೊಲಿಯುತ್ತಿದ್ದ. ಅಳತೆ ತೆಗೆದು, ಒಂದಿಷ್ಟೂ ಅಳತೆ ವ್ಯತ್ಯಾಸವಾಗದೆ ಬಟ್ಟೆ ಹೊಲಿಯುವುದರಲ್ಲಿ ಅವನು ಹೆಸರುಗಾರ.
ಶರ್ಟು, ಪ್ಯಾಂಟು, ಚೂಡಿದಾರ, ರವಕೆ, ಲಂಗ- ಎಲ್ಲವನ್ನೂ ಹೊಲಿದು ಕೊಡುತ್ತಿದ್ದನಾದರೂ ಕ್ರಮೇಣ ಪ್ರಸಿದ್ಧವಾದದ್ದು ಅವನು ಹೊಲಿದುಕೊಡುತ್ತಿದ್ದ ಚಡ್ಡಿ. ಕೊನೆಕೊನೆಗೆ ಚಡ್ಡಿ ಹೊಲಿಸಿಕೊಂಡರೆ ಬೀರಪ್ಪನ ಹತ್ತಿರವೇ ಹೊಲಿಸಿಕೊಳ್ಳಬೇಕು ಅಂತ ಜನ ಮಾತಾಡಿಕೊಳ್ಳತೊಡಗಿದರು.
ಚಡ್ಡಿ ಹೊಲಿದೂ ಹೊಲಿದೂ ಅಭ್ಯಾಸವಾಯಿತೋ, ಮನಸ್ಸಿಗೆ ಬರೀ ಚಡ್ಡಿಯನ್ನಷ್ಟೇ ಹೊಲೀಬೇಕು ಅನ್ನಿಸಿತೋ ಅಥವಾ ಚಡ್ಡಿ ಹೊಲಿಯುವುದೇ ಒಂದು ವ್ಯಸನವಾಯಿತೋ ಏನೋ. ಆಮೇಲಾಮೇಲೆ ಶರ್ಟು ಬಟ್ಟೆ, ರವಕೆ ಬಟ್ಟೆ, ಪ್ಯಾಂಟು ಪೀಸು ಒಯ್ದು ಕೊಟ್ಟರೂ ಬೀರಪ್ಪ ಅದರಲ್ಲಿ ಚಡ್ಡಿ ಹೊಲಿದುಕೊಡುತ್ತಿದ್ದ. ಜನ ಬೈದರು, ಬುದ್ಧಿ ಹೇಳಿದರು, ತಿದ್ದಲು ನೋಡಿದರು. ರೇಗಿದರು.
ಬೀರಪ್ಪ ಬದಲಾಗಲಿಲ್ಲ.
ಇತ್ತೀಚೆಗೆ ಚಡ್ಡಿ ಹೊಲಿಸಬೇಕಾದವರು ಮಾತ್ರ ಬೀರಪ್ಪನ ಬಳಿಗೆ ಬರುತ್ತಾರಂತೆ.
ಏನೇ ಆದ್ರೂ ಚಡ್ಡಿ ಮಾತ್ರ ಸಕತ್ತಾಗೇ ಹೊಲೀತಾನೆ ಬಿಡ್ರೀ ಅಂತ ನಮ್ಮೂರ ಜನ ಗುಂಪು ಸೇರಿದಲ್ಲೆಲ್ಲ, ಚಡ್ಡಿ ಮಾತು ಬಂದಾಗಲೆಲ್ಲ ಬೀರಪ್ಪನನ್ನು ಕೊಂಡಾಡುವುದಿದೆ.

Sunday, November 23, 2008

ಅವಳು ಫೋನ್ ಮಾಡಿದ ನಂತರ..

ನಮ್ಮೂರಿನಿಂದ ಬೆಟ್ಟವೇರಿ ಬೆಟ್ಟ ಇಳಿದರೆ ಬಾಳೆಹೊಳೆ. ಅಲ್ಲಿಂದ ಎಡಕ್ಕೆ ತಿರುಗಿ ಸಾಗಿದರೆ ಬಜಗೋಳಿ ಕಡೆಗೆ ಹೋಗುವ ರಸ್ತೆ. ಅದು ಕುದುರೆಮುಖವನ್ನು ಬಳಸಿಕೊಂಡು ಹೋಗುತ್ತದೆ. ಇವತ್ತು ಕುದುರೆಮುಖ ಮೌನನಗರಿ.
ಅದೇ ಹಾದಿಯಲ್ಲಿ ಹೋದರೆ ಹನುಮಾನ್ ಗುಂಡಿ, ಗಂಗಾಮೂಲ ಸಿಗುತ್ತದೆ.
ಹನುಮಾನ್ ಗುಂಡಿಗೆ ಇಳಿದರೆ ಅಲ್ಲೊಂದು ಪುಟ್ಟ ಜಲಪಾತ. ಅಲ್ಲಿಗೆ ಕರೆದೊಯ್ದ ಅವಳು ನನಗೆ ಗೊತ್ತೇ ಆಗದ ಹಾಗೆ ಮುತ್ತಿಟ್ಟಾಗ ನನಗಿನ್ನೂ ಹದಿನೆಂಟು. ಅವಳಿಗೆ ಇಪ್ಪತ್ತು.
ಇವತ್ತು ಅವಳ ಸುದ್ದಿ ಬಂತು. ಶ್ರೀಲಂಕಾದಲ್ಲಿದ್ದಾಳೆ. ಸಮುದ್ರದ ಪಕ್ಕ ಅವನೊಂದಿಗೆ ಸಾಗುತ್ತಿದ್ದೇನೆ. ಸಮುದ್ರ ಸಣ್ಣದು ಅನ್ನಿಸುತ್ತದೆ ಅವನ ಪ್ರೀತಿಯ ಮುಂದೆ ಅಂದಳು.
ಮನಸ್ಸಿಗೆ ಯಾಕೋ ಕಿರಿಕಿರಿ.
ಅವಳನ್ನು ಮರೆಯಬೇಕು ಅಂದುಕೊಂಡು ಒಂದೂವರೆ ಗಂಟೆ ಈಜುಹೊಡೆದೆ.
ಹಳೆಯ ಪ್ರೇಮ ಕೊಬ್ಬಿನ ಹಾಗೆ ಹೊಟ್ಟೆಯ ಸುತ್ತ ಬೆಳೆಯುವ ಬೊಜ್ಜಿನ ಹಾಗೆ ಮನಸ್ಸಿನ ಸುತ್ತ ಬೆಳೆಯುತ್ತವಂತೆ. ಅದನ್ನು ಆಗಾಗ ಕರಗಿಸದೇ ಹೋದರೆ ಅಪಾಯ.
ಮನಸು ಮೀನಿನಂತೆ. ನೀರು ಪ್ರೀತಿಯಂತೆ.
ಅವಳ ಕಣ್ಣು ಗಾಳವಲ್ಲ, ಬಲೆಯಲ್ಲ. ಮತ್ತೇನು ಅಂತ ಹೇಳಲಾರೆ.

Saturday, November 22, 2008

ನೆಲ್ಲಿಕಾಯಿ ತಿಂದು ನೀರು ಕುಡಿದ ಹಾಗೆ...

ನಮ್ಮೂರಿನ ನೆನಪಾದಾಗ ಹಾಗೆ.
ನೆಲ್ಲಿಕಾಯಿ ತಿಂದು ಸ್ವಲ್ಪ ಹೊತ್ತಿನ ನಂತರ ನೀರು ಕುಡಿದರೆ ಬಾಯೆಲ್ಲ ಸಿಹಿ ಸಿಹಿ.
ನಮ್ಮೂರಿನ ತುಂಬ ನೆಲ್ಲಿ ಮರಗಳು. ಅದರ ಎಲೆಯ ಬಣ್ಣ, ನೆಲ್ಲಿ ಕಾಯಿಯ ಬಣ್ಣ, ಆ ತಿಳಿ ಹಸಿರು, ಬಿಳಿ ಹಸಿರು ಎಲ್ಲಾ ನಮ್ಮಲ್ಲಿ ವಿಚಿತ್ರ ಸಂತೋಷ ತುಂಬುತ್ತಿದ್ದವು. ನೆಲ್ಲಿ ಕಾಯಿ ಮರದಲ್ಲಿ ಹೂವಾಗುತ್ತಿತ್ತು. ಆ ಹೂವಿಗೆ ಜೇನು ನೊಣಗಳು ಮುತ್ತುತ್ತಿದ್ದವು. ಹೀಗಾಗಿ ತುಳಸಿಪೂಜೆಯ ನಂತರದ ದಿನಗಳಲ್ಲಿ ತೆಗೆದ ಜೇನಿಗೂ ಒಂಥರ ನೆಲ್ಲಿಕಾಯಿಯ ರುಚಿ.
ಎರಡೂ ಬದಿ ನೆಲ್ಲಿಮರ. ನಡುವೆ ಸುಮ್ಮನೆ ಹಾದಿ. ಬೆಳದಿಂಗಳ ರಾತ್ರಿ, ಸ್ವಲ್ಪ ದೂರ ಹೋದರೆ ಹಳೇ ಕಾಲದಲ್ಲಿ ತಲೆಹೊರೆ ಇಳಿಸುವುದಕ್ಕೆಂದು ಮಾಡಿಟ್ಟ ಕಲ್ಲುಕಟ್ಟೆ. ಆಳವಿಲ್ಲದ ಹಳ್ಳ, ಅದಕ್ಕೊಂದು ಎತ್ತರವಿಲ್ಲದ ಸೇತುವೆ.
ಯಾವತ್ತೋ ನೆಲ್ಲಿಕಾಯಿ ತಿಂದು ಇವತ್ತು ನೀರು ಕುಡಿಯುತ್ತಿದ್ದೇನೆ.
ಆದರೂ ಬಾಯಿತುಂಬ ಸಿಹಿ.

ಕೆಲವು ಪಾಠಗಳು

  1. ಪಾಠ ಒಂದು- ಹಸಿವು ಮತ್ತು ಬಾಯಾರಿಕೆಯ ಹಾಗೆ ಕಾಮ ಕೂಡ.
  2. ಪಾಠ ಎರಡು- ಪ್ರೀತಿಗೆ ಮೂರು ಮುಖ. ಲಸ್ಟ್, ಅಟ್ರಾಕ್ಷನ್ ಮತ್ತು ಅಟ್ಯಾಚ್ ಮೆಂಟ್
  3. ಪಾಠ ಮೂರು - ಇತ್ತೀಚಿನ ಅಧ್ಯಯನದ ಪ್ರಕಾರ ಪ್ರೀತಿಯಲ್ಲಿ ಬಿದ್ದಾಗ ಮೆದುಳು ಕೆಲವು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಅವುಗಳಲ್ಲಿ ಮುಖ್ಯವಾದದ್ದು ಫೆರೋಮೋನ್ಸ್, ಡೋಪಮೈನ್, ನಾರೆಪೈನ್ ಪ್ರೈನ್ ಮತ್ತು ಸೆರಾಟೊನಿನ್. ಇವು ಆಂಪಿಟಮೈನ್ಸ್ ಥರ ಮೆದುಳಿನ ಪ್ಲೆಷರ್ ಸೆಂಟರನ್ನು ಉದ್ದೀಪನಗೊಳಿಸುತ್ತೆ. ಅದರಿಂದಾಗಿ ಹೃದಯ ಬಡಿತ ಜಾಸ್ತಿಯಾಗುತ್ತೆ. ಹಸಿವು ಮಾಯ, ನಿದ್ದೆ ಬರೋದಿಲ್ಲ. ಸದಾ ಉದ್ವಿಗ್ನ ಮನಸ್ಥಿತಿ, ಒಂಥರಾ ಎಕ್ಸೈಟ್ ಮೆಂಟು.
  4. ಈ ಸ್ಥಿತಿ ಒಂದೂವರೆ ವರುಷದಿಂದ ಮೂರು ವರುಷದ ತನಕ ಇರುತ್ತದಂತೆ.
ಪಾಠ ಓದುವುದಕ್ಕೆ ಎಷ್ಟು ಸರಳ. ಅದೇ ಹೀಗಾದಾಗ ಎಂಥ ತಲ್ಲಣ. ಒಂದೂವರೆ ವರುಷದ ನಂತರ ಏನಾಗುತ್ತದೆ ಅಂತ ನಿಮಗೇನಾದರೂ ಗೊತ್ತಾ?

ಗೆಳೆಯನ ಮದುವೆ ನೋಡಿದಾಗ ಅನ್ನಿಸಿದ್ದು

ಅಮ್ಮನನ್ನು ನಾವು ಪ್ರೀತಿಸುತ್ತೇವಾ?
ಬಹುಶಃ ಇಲ್ಲ. ಅಮ್ಮ ಜೊತೆಗಿರುತ್ತಾರೆ. ಹೃದಯದ ಹಾಗೆ, ಉಸಿರಾಟದ ಹಾಗೆ ಆ ಇರುವು ಸರಾಗ, ಇದ್ದೂ ತನ್ನಿರವನ್ನು ಬಿಟ್ಟು ಕೊಡದ ಹಾಗೆ.
ಅವಳ ಪ್ರೀತಿ ಹಾಗಲ್ಲ.
ನಾನದನ್ನು ಸಾಬೀತು ಮಾಡುತ್ತಿರಬೇಕು. ಪ್ರೀತಿಯನ್ನು ಅವಳ ಕಣ್ಣುಗಳಲ್ಲಿ ನಾನು, ನನ್ನ ವರ್ತನೆಯಲ್ಲಿ ಅವಳು ಹುಡುಕಾಡಬೇಕು. ಸಿಗದಿದ್ದಾಗ ನೋಯಬೇಕು. ಅದಕ್ಕಾಗಿ ಕಾತರಿಸಬೇಕು. ಜಗಳ ಆಡಬೇಕು.
ಗೆಳೆಯನ ಜೊತೆ ಹೋದರೆ, ಮತ್ತೊಬ್ಬ ಹುಡುಗಿಯ ಜೊತೆ ಸಲ್ಲಾಪಿಸಿದರೆ ಅಮ್ಮನಿಗೆ ಸಿಟ್ಟು ಬರುವುದಿಲ್ಲ. ಅವಳಿಗೆ ಬರುತ್ತೆ. ಅವಳ ವಿಚಾರದಲ್ಲಿ ನನಗೂ.
ಅವಳು ಇನ್ಯಾರ ಜೊತೆಗೋ ನಗುತ್ತಾ ಮಾತಾಡಿದರೆ ನನಗೆ ಅಸಹನೆ. ನಾನಲ್ಲದೇ ಮತ್ಯಾರೂ ಅವಳಿಗೆ ಸಂತೋಷ ಕೊಡಬಾರದು ಎಂಬ ಭಾವವಾ ಅದು?
ಅದೇ ಅಮ್ಮ ಮಗನಿಗೆ ತಾನೇ ಚೆಲುವಿಯನ್ನು ಹುಡುಕಿ, ಅವಳನ್ನೊಪ್ಪಿಸಿ, ಧಾರೆ ಎರೆಸಿಕೊಂಡು, ಮಗನನ್ನು ಅವಳ ಸುಪರ್ದಿಗೆ ಒಪ್ಪಿಸಿ ಎಷ್ಟು ಸಂತೋಷವಾಗಿರುತ್ತಾಳೆ.
ಅದೂ ಕಲ್ಪನೆಯಾ?
ಅಮ್ಮನಿಗೆ ಒಳಗೊಳಗೇ ಸಂಕಟ, ತಳಮಳ ಕಾಡುತ್ತಿರಬಹುದಾ?

ಊರಿಂದ ಹೊರಟು ಬರುವಾಗ

ಎಲ್ಲಿಗೆ ಹೋಗ್ತಿದ್ದೀಯಾ?
ಗೊತ್ತಿಲ್ಲ.
ಮುಂದೇನು ಮಾಡ್ತೀಯಾ?
ಗೊತ್ತಿಲ್ಲ.
ಯಾವಾಗ ವಾಪಸ್ ಬರ್ತೀಯಾ?
ಗೊತ್ತಿಲ್ಲ
ಯಾರ ಮನೇಲಿರ್ತೀಯಾ?
ಗೊತ್ತಿಲ್ಲ.
ಗೊತ್ತು ಮತ್ತು ಇಲ್ಲ ಸೇರಿದರೆ ಉ ಕಾರ ಮಾಯವಾಗುವುದರಿಂದ ಇದು ಲೋಪ ಸಂಧಿ.
ಗೊತ್ತಿಲ್ಲ ಎನ್ನುವುದು ಲೋಪವಾ? ಪಾಪವಾ?
ಶಾಪವಾ?

ಆ ಮಧ್ಯಾಹ್ನ ಸಣ್ಣಗೆ ಮಳೆಯಿತ್ತು

ಶನಿವಾರ ಬಿಡುವು.
ಸೆಂಟ್ರಲ್ ಲೈಬ್ರರಿಯಲ್ಲಿ ಕುಳಿತು ಕಾದಂಬರಿಯೊಂದನ್ನು ಓದಿ ಮುಗಿಸುವ ಅವಸರದಲ್ಲಿದ್ದೆ.
ನಿರ್ಜನ ಲೈಬ್ರರಿ. ಹೊರಗೆ ನಿಯತಕಾಲಿಕೆಗಳು ಇರುವ ಟೇಬಲ್ಲಿನ ಸುತ್ತ ಜನ. ಅಲ್ಲಿರುವ ಟ್ಯಾಬ್ಲಾಯಿಡುಗಳಿಗೆ ಅಪಾರ ಬೇಡಿಕೆ.
ಅಷ್ಟು ಹೊತ್ತಿಗೆ ಅವನು ಲೈಬ್ರರಿಗೆ ಬಂದ. ಜುಬ್ಬಾ ತೊಟ್ಟಿದ್ದ. ವಯಸ್ಸು ಐವತ್ತು ದಾಟಿದಂತೆ ಕಾಣುತ್ತಿತ್ತು. ಆಗಷ್ಟೇ ಊಟ ಮುಗಿಸಿರಬೇಕು. ತುಂಬುಗಡ್ಡಕ್ಕೆ ಮೊಸರನ್ನ ಮೆತ್ತಿದ್ದನ್ನೂ ಅವನು ಸರಿಯಾಗಿ ತೊಳೆದುಕೊಂಡಿರಲಿಲ್ಲ.
ಬಂದವನೇ, ನಿನ್ನೆಯೋ ಮೊನ್ನೆಯೋ ಓದಿಟ್ಟ ಪುಸ್ತಕಕ್ಕಾಗಿ ಹುಡುಕಾಡುವವನಂತೆ ಹುಡುಕಾಡಿದ. ಅದನ್ನು ಅವನು ಅಲ್ಲೆಲ್ಲೋ ಥಟ್ಟನೆ ಸಿಗುವಂತೆ ಎತ್ತಿಟ್ಟಿದ್ದ ಎಂದು ಕಾಣುತ್ತದೆ.
ತುಂಬಾ ಹೊತ್ತು ಹುಡುಕಿ ನಿರಾಶನಾಗಿ ನನ್ನ ಬಳಿ ಬಂದ. ನಾನು ಓದುತ್ತಿರುವ ಪುಸ್ತಕವನ್ನು ನೋಡಿದ. ಅವನು ಅರ್ಧ ಓದಿಟ್ಟ ಪುಸ್ತಕ ಅದೇ ಆಗಿತ್ತೆಂದು ಕಾಣುತ್ತದೆ. ನಾನು ಮಾತಾಡಿಸುವುದಕ್ಕೆ ಹೋಗಲಿಲ್ಲ. ಸುಮ್ಮನೆ ನನ್ನೆದುರು ಕೂತ. ನಾನು ಓದುತ್ತಲೇ ಇದ್ದೆ.
ಸುಮಾರು ಅರ್ಧಗಂಟೆ ಹಾಗೇ ಕೂತಿದ್ದ. ನಾನು ಬೇಗ ಓದಿ ಮುಗಿಸಬಹುದು ಎಂಬ ಭರವಸೆಯಿಂದಲೋ ಎಂಬಂತೆ ಕಾಯುತ್ತಿದ್ದ.
ಅವನನ್ನು ವಾರೆಗಣ್ಣಿಂದ ನೋಡಿದವನು ಅವನನ್ನು ಮಾತಾಡಿಸುವ ಗೋಜಿಗೂ ಹೋಗದೆ ಹಠದಿಂದ ಎಂಬಂತೆ ಓದುತ್ತಾ ಕೂತೆ.
ಮತ್ತೊಂದಷ್ಟು ಹೊತ್ತು ಕೂತಿದ್ದು ಕೊನೆಗೆ ನಿರಾಸೆಯಿಂದ ಎದ್ದು ಹೋದ.
ಹೋಗುವಾಗ ಅವನ ಕಣ್ಣುಗಳು ತುಂಬಿ ಬಂದಿದ್ದವು ಎಂದು ಈಗ ಅನ್ನಿಸುತ್ತದೆ.
ನಾನ್ಯಾಕೆ ಅವನಿಗೆ ಆ ಪುಸ್ತಕವನ್ನು ಕೊಡಲಿಲ್ಲ. ಅವನನ್ನು ಯಾಕೆ ಮಾತಾಡಿಸಲಿಲ್ಲ. ಅವನು ನಾನು ಓದುತ್ತಿದ್ದ ಪುಸ್ತಕಕ್ಕಾಗೇ ಕಾಯುತ್ತಿದ್ದನಾ ಅನ್ನುವುದೂ ಗೊತ್ತಿಲ್ಲ.
ತಿರಸ್ಕೃತಗೊಂಡ ಪ್ರೇಮಿಯ ಹಾಗೆ ಅವನು ಮರಳಿ ಹೋಗುವುದನ್ನು ಮಾತ್ರ ನಾನು ಮರೆಯಲಾರೆ.

Friday, November 21, 2008

ದಿನದ ಕೊನೆಗೆ ನಾಲ್ಕು ಮಾತು

ದಿನಾ ಹುಟ್ಟಿ ದಿನಾ ಸಾಯುವ ಹಗಲು, ಕ್ಷಣಕ್ಷಣ ಹುಟ್ಟಿ ಮರುಕ್ಷಣ ಸಾಯುವ ನಮ್ಮ ಆಸೆ, ಹಂಬಲ, ವೈರಾಗ್ಯ ಮತ್ತು ವ್ಯಾಮೋಹ, ತುಂಬ ದಿನ ಹಾಗೇ ಉಳಿದುಬಿಡುವ ಒಂದು ಪ್ರೇಮ, ಮತ್ತೊಂದಷ್ಟು ದಿನಗಳನ್ನು ನೀರಸಗೊಳಿಸುವ ವಿರಹ, ಅವನನ್ನು ಚುಚ್ಚಿ ನೋಯಿಸುವ ಮಾನವೀಯ ಗುಣ, ಅವಳನ್ನು ಕಂಗೆಡಿಸುವಂತೆ ಪ್ರೀತಿಸುವ ಮೃಗೀಯ ಗುಣ.
ಹೀಗೆ ಬರೆಯಲು ಕೂತಾಗ ಏನೇನೋ ಕಾಡುತ್ತದೆ. ಇಷ್ಟು ದಿನ ಬರೆಯುತ್ತಿದ್ದೆ. ಬೇರೆಲ್ಲೋ ಹೇಗೋ. ಅದನ್ನೆಲ್ಲ ಪಕ್ಕಕ್ಕಿಟ್ಟು ಹಳೆಯ ಜನ್ಮದಿಂದ ಕಳಚಿಕೊಂಡು ಕನ್ನಡಿ ಮುಂದೆ ನಿಂತಿದ್ದೇನೆ. ಎಂದೂ ಕಳೆದುಕೊಳ್ಳಬಾರದ್ದು ಮೂರೇ ಮೂರು- ಇಂಟಿಗ್ರಿಟಿ, ಮುಗ್ಧತೆ ಮತ್ತು ಮೊನ್ನೆ ಮೊನ್ನೆ ಕೊಂಡ ಲ್ಯಾಪ್-ಟಾಪು.
ತಿಂಗಳಾನುಗಟ್ಟಲೆ ನಲ್ಲಿ ಸೋರುತ್ತಿದ್ದರೂ ಸರಿಪಡಿಸಲಾಗದ ಸೋಮಾರಿತನ ಇಷ್ಟವಿಲ್ಲ. ಬೇರೊಬ್ಬರು ಏನಾದರೂ ಮಾಡಿ ಅಂದಾಗ ಇಷ್ಟವಾಗದೇ ಹೋದರೆ ಮಾಡದೇ ಉಳಿಯುವ ಸ್ವಾತಂತ್ರ್ಯ ಬೇಕು.
ಪ್ರತಿರಾತ್ರಿ ಇಲ್ಲಿ ನಾಲ್ಕಕ್ಷರ ಗೀಚುತ್ತೇನೆ.
ಅಂದಹಾಗೆ ಬರೆಯುವುದು ಎಷ್ಚು ಕಷ್ಟ ನೋಡಿ. ಇಷ್ಟವಾದರೆ ಓದಿ ಅನ್ನುವುದು ಸುಳ್ಳಾಗುತ್ತದೆ. ಇಷ್ಟವಾಗದ ಹೊರತು ಯಾರೂ ಓದುವುದಿಲ್ಲ. ಓದಿದರೆ ಓದಿ ಬಿಟ್ಟರೆ ಬಿಡಿ ಅಂದರೆ ದುರಹಂಕಾರವಾಗುತ್ತದೆ. ಬೇಕಾದ್ರೆ ಓದ್ಕೊಳ್ಳಲಿ ಅಂದ ಉಡಾಫೆಯಾಗುತ್ತದೆ. , ಬೇಡಿಕೆ ಯಾವುದೂ ಇಲ್ಲಿ ಮುಖ್ಯವಲ್ಲ.
ಪ್ರೀತಿಯ ಹಾಗೆ ಇದು ಇಬ್ಬರೂ ಹೇಳದೇ, ಸಹಜವಾಗಿ ಘಟಿಸುವ ಕ್ರಿಯೆ ಆಗಬೇಕು. ಹೀಗಾಗಿ ನಾನೇನೂ ಹೇಳುವುದಿಲ್ಲ. ಅಂಥದ್ದೇನಾದರೂ ನಡೆದರೆ ನಡೆಯಲಿ.
ಪ್ರೀತಿಯಿಂದ..
ರಿಶಿ