Monday, November 24, 2008

ವ್ಯಸನ

ನಮ್ಮೂರಲ್ಲೊಬ್ಬ ಟೈಲರ್ ಇದ್ದ. ಬೀರಣ್ಣ, ಬೀರಪ್ಪ ಅಂತೆಲ್ಲ ಅವನಿಗೆ ಅನೇಕ ಹೆಸರು. ಬೀರ ಅಂತ ಅಪ್ಪ ಇಟ್ಟ ಹೆಸರಿರಬೇಕು. ಯಾರ ಜೊತೆಗೂ ಮಾತಾಡುತ್ತಿರಲಿಲ್ಲ. ತನ್ನ ಪಾಡಿಗೆ ಬಟ್ಟೆ ಹೊಲಿಯುತ್ತಿದ್ದ. ಅಳತೆ ತೆಗೆದು, ಒಂದಿಷ್ಟೂ ಅಳತೆ ವ್ಯತ್ಯಾಸವಾಗದೆ ಬಟ್ಟೆ ಹೊಲಿಯುವುದರಲ್ಲಿ ಅವನು ಹೆಸರುಗಾರ.
ಶರ್ಟು, ಪ್ಯಾಂಟು, ಚೂಡಿದಾರ, ರವಕೆ, ಲಂಗ- ಎಲ್ಲವನ್ನೂ ಹೊಲಿದು ಕೊಡುತ್ತಿದ್ದನಾದರೂ ಕ್ರಮೇಣ ಪ್ರಸಿದ್ಧವಾದದ್ದು ಅವನು ಹೊಲಿದುಕೊಡುತ್ತಿದ್ದ ಚಡ್ಡಿ. ಕೊನೆಕೊನೆಗೆ ಚಡ್ಡಿ ಹೊಲಿಸಿಕೊಂಡರೆ ಬೀರಪ್ಪನ ಹತ್ತಿರವೇ ಹೊಲಿಸಿಕೊಳ್ಳಬೇಕು ಅಂತ ಜನ ಮಾತಾಡಿಕೊಳ್ಳತೊಡಗಿದರು.
ಚಡ್ಡಿ ಹೊಲಿದೂ ಹೊಲಿದೂ ಅಭ್ಯಾಸವಾಯಿತೋ, ಮನಸ್ಸಿಗೆ ಬರೀ ಚಡ್ಡಿಯನ್ನಷ್ಟೇ ಹೊಲೀಬೇಕು ಅನ್ನಿಸಿತೋ ಅಥವಾ ಚಡ್ಡಿ ಹೊಲಿಯುವುದೇ ಒಂದು ವ್ಯಸನವಾಯಿತೋ ಏನೋ. ಆಮೇಲಾಮೇಲೆ ಶರ್ಟು ಬಟ್ಟೆ, ರವಕೆ ಬಟ್ಟೆ, ಪ್ಯಾಂಟು ಪೀಸು ಒಯ್ದು ಕೊಟ್ಟರೂ ಬೀರಪ್ಪ ಅದರಲ್ಲಿ ಚಡ್ಡಿ ಹೊಲಿದುಕೊಡುತ್ತಿದ್ದ. ಜನ ಬೈದರು, ಬುದ್ಧಿ ಹೇಳಿದರು, ತಿದ್ದಲು ನೋಡಿದರು. ರೇಗಿದರು.
ಬೀರಪ್ಪ ಬದಲಾಗಲಿಲ್ಲ.
ಇತ್ತೀಚೆಗೆ ಚಡ್ಡಿ ಹೊಲಿಸಬೇಕಾದವರು ಮಾತ್ರ ಬೀರಪ್ಪನ ಬಳಿಗೆ ಬರುತ್ತಾರಂತೆ.
ಏನೇ ಆದ್ರೂ ಚಡ್ಡಿ ಮಾತ್ರ ಸಕತ್ತಾಗೇ ಹೊಲೀತಾನೆ ಬಿಡ್ರೀ ಅಂತ ನಮ್ಮೂರ ಜನ ಗುಂಪು ಸೇರಿದಲ್ಲೆಲ್ಲ, ಚಡ್ಡಿ ಮಾತು ಬಂದಾಗಲೆಲ್ಲ ಬೀರಪ್ಪನನ್ನು ಕೊಂಡಾಡುವುದಿದೆ.

4 comments:

Anonymous said...

ಋಷ್ಯಶೃಂಗ,
ಈದೀಗ ನಿಮ್ಮ ಬ್ಲಾಗಿಗೆ ಬಂದೆ. ಪುಟ್ಟ ಬರಹಗಳಾದರೂ ಮಲೆನಾಡ ಕಂಪು ತುಂಬಿಕೊಂಡು ಅರಳುತ್ತಿವೆ. ಪುನಹ ಬಾಳೆಹೊಳೆ, ಕುದುರೇಮುಖ ಎಲ್ಲಕಡೆ ಹೋಗಿಬಂದಹಾಗಾಯಿತು.ಸ್ವಾಗತ. ಬರೆಯುತ್ತಿರಿ. ನಿಲ್ಲಿಸಬೇಡಿ, ಆಯಿತ?
ಅಕ್ಕರೆ, ಟೀನಾ

-ಹಾಲ said...

ಹೀಗೆ ಬರೀತಾ ಇರಿ....ಬರಹದಲ್ಲಾದರೂ ಮಲೆನಾಡು ಮತ್ತೆ ಮತ್ತೆ ನೆನಪಾಗಲಿ....
ಹಾಲಸ್ವಾಮಿ,
ಹುಬ್ಬಳ್ಳಿ,

ಸುಧನ್ವಾ ದೇರಾಜೆ. said...

hey, very good attempt. congrats.

ತೇಜಸ್ವಿನಿ ಹೆಗಡೆ said...

ಬ್ಲಾಗ್‍ನ ಶೀರ್ಷಿಕೆ ಹಾಗೂ ಬರಹಗಳು ತುಂಬಾ ಹಿಡಿಸಿದವು. ಚೆನಾಗಿದೆ. ಮುಂದುವರಿಸಿ.