Sunday, November 23, 2008

ಅವಳು ಫೋನ್ ಮಾಡಿದ ನಂತರ..

ನಮ್ಮೂರಿನಿಂದ ಬೆಟ್ಟವೇರಿ ಬೆಟ್ಟ ಇಳಿದರೆ ಬಾಳೆಹೊಳೆ. ಅಲ್ಲಿಂದ ಎಡಕ್ಕೆ ತಿರುಗಿ ಸಾಗಿದರೆ ಬಜಗೋಳಿ ಕಡೆಗೆ ಹೋಗುವ ರಸ್ತೆ. ಅದು ಕುದುರೆಮುಖವನ್ನು ಬಳಸಿಕೊಂಡು ಹೋಗುತ್ತದೆ. ಇವತ್ತು ಕುದುರೆಮುಖ ಮೌನನಗರಿ.
ಅದೇ ಹಾದಿಯಲ್ಲಿ ಹೋದರೆ ಹನುಮಾನ್ ಗುಂಡಿ, ಗಂಗಾಮೂಲ ಸಿಗುತ್ತದೆ.
ಹನುಮಾನ್ ಗುಂಡಿಗೆ ಇಳಿದರೆ ಅಲ್ಲೊಂದು ಪುಟ್ಟ ಜಲಪಾತ. ಅಲ್ಲಿಗೆ ಕರೆದೊಯ್ದ ಅವಳು ನನಗೆ ಗೊತ್ತೇ ಆಗದ ಹಾಗೆ ಮುತ್ತಿಟ್ಟಾಗ ನನಗಿನ್ನೂ ಹದಿನೆಂಟು. ಅವಳಿಗೆ ಇಪ್ಪತ್ತು.
ಇವತ್ತು ಅವಳ ಸುದ್ದಿ ಬಂತು. ಶ್ರೀಲಂಕಾದಲ್ಲಿದ್ದಾಳೆ. ಸಮುದ್ರದ ಪಕ್ಕ ಅವನೊಂದಿಗೆ ಸಾಗುತ್ತಿದ್ದೇನೆ. ಸಮುದ್ರ ಸಣ್ಣದು ಅನ್ನಿಸುತ್ತದೆ ಅವನ ಪ್ರೀತಿಯ ಮುಂದೆ ಅಂದಳು.
ಮನಸ್ಸಿಗೆ ಯಾಕೋ ಕಿರಿಕಿರಿ.
ಅವಳನ್ನು ಮರೆಯಬೇಕು ಅಂದುಕೊಂಡು ಒಂದೂವರೆ ಗಂಟೆ ಈಜುಹೊಡೆದೆ.
ಹಳೆಯ ಪ್ರೇಮ ಕೊಬ್ಬಿನ ಹಾಗೆ ಹೊಟ್ಟೆಯ ಸುತ್ತ ಬೆಳೆಯುವ ಬೊಜ್ಜಿನ ಹಾಗೆ ಮನಸ್ಸಿನ ಸುತ್ತ ಬೆಳೆಯುತ್ತವಂತೆ. ಅದನ್ನು ಆಗಾಗ ಕರಗಿಸದೇ ಹೋದರೆ ಅಪಾಯ.
ಮನಸು ಮೀನಿನಂತೆ. ನೀರು ಪ್ರೀತಿಯಂತೆ.
ಅವಳ ಕಣ್ಣು ಗಾಳವಲ್ಲ, ಬಲೆಯಲ್ಲ. ಮತ್ತೇನು ಅಂತ ಹೇಳಲಾರೆ.

4 comments:

NilGiri said...

ಚಿಕ್ಕ ಚೊಕ್ಕ ಬರಹ. ಬಹಳ ಚೆನ್ನಾಗಿ ಬರೆದಿದ್ದೀರಿ. ಹೀಗೆ ಮುಂದುವರೆಸಿ.

Unknown said...

ಸೊಗಸಾದ ಬರೆಹ. ತುಂಬಾ ಇಷ್ಟವಾಯ್ತು. ನಿಮ್ಮ ಊರು ಇತ್ತೀಚೆಗೆ ರಕ್ತಸಿಕ್ತವಾಗಿರಬಹುದು. ಅದು ನಿಮ್ಮ ಬರೆಹದಲ್ಲೆಲ್ಲೂ ಕಾಣದು. ಅಲ್ಲೇನಿದ್ದರೂ ಹಸಿ ಹಸಿ ಪ್ರೀತಿ. ಹೀಗೇ ಬರೆಯುತ್ತಿರಿ ಎಂಬುದು ಕೋರಿಕೆ.

- ಗೊದ್ಲಬೀಳು ಪರಮೇಶ್ವರ
ಬೆಂಗಳೂರು

mahesh said...

really heart touchin...

ಋಷ್ಯಶೃಂಗ said...

ಆತ್ಮೀಯರೇ,
ನಿಮ್ಮೆಲ್ಲರ ಪ್ರೀತಿಗೆ ಪ್ರೋತ್ಸಾಹಕ್ಕೆ ಕೃತಜ್ಞ. ಬರೆಯುವುದಕ್ಕೆ ಸ್ಪೂರ್ತಿ.
-ನೀಲಗಿರಿಯವರೇ, ಚಿಕ್ಕದಾಗಿ ಬರೆಯುವುದಕ್ಕೆ ನಂಗೆ ಬರೋದು.
- ಪ್ರಿಯ ಪರಮೇಶ್ವರ್ , ನಿಮ್ಮ ಹಾರೈಕೆಗೆ ಧನ್ಯ.
-ಮಹೇಶ್ ಸರ್, ಧನ್ಯವಾದ